ಶ್ರೀ ಕೋಟಿಲಿಂಗೇಶ್ವರ, ಸೋಮನಾಥ ಮತ್ತು ಕೋಲಾರಮ್ಮ ದೇವಸ್ಥಾನ

ಕೋಲಾರಮ್ಮ ದೇವಸ್ಥಾನ

   

kolaramma-1   kolaramma-4   kolaramma-2

ಇದು ಗಂಗರ ಕಾಲದಲ್ಲಿ ಕಟ್ಟಿರುವ ಪ್ರತೀತಿ ಇದೆ. ಬ್ರಹದಾಕಾರದ ಹೆಬ್ಬಾಗಿಲನ್ನು ದಾಟಿ ಒಳಗೆ ಹೋದಾಗ ಧ್ವಜಸ್ಥಂಭ ಎದುರಾಗುತ್ತದೆ. ಚಂದ್ರಶಾಲೆಯಲ್ಲಿ ಪ್ರದಕ್ಷಿಣೆ ಹೊರಟರೆ ನಂತರ ದೇವಿಯ ದರ್ಶನ ಪಡೆಯಬಹುದು. ಇಲ್ಲಿ ಎಲ್ಲ ಕಡೆಯ ದೇವಸ್ಥಾನಗಳಂತೆ ನಮ್ಮೆದುರಿಗೆ ಅಲಂಕೃತ ದೇವಿ ಇರುವುದಿಲ್ಲ. ದೇವಿಯ ಮೂರ್ತಿಯ ಪ್ರತಿಬಿಂಬವನ್ನು ನಾವು ಕನ್ನಡಿಯಲ್ಲಿ ನೋಡಬೇಕು. ಕೋಲಾರಮ್ಮನ ದರ್ಶನ ಪಡೆದ ನಂತರ ಚೇಳಮ್ಮನ ದರ್ಶನ ಪಡೆಯುವುದು. ಇಲ್ಲಿ ಯಾರೂ ನಾಣ್ಯಗಳನ್ನು ಹಾಕಬಾರದು ಎಂದು ವಿನಂತಿಸಿದ್ದಾರೆ, ಹಾಕಿದರೆ ಚೇಳುಗಳ ಉತ್ಪತ್ತಿಗೆ ತೊಂದರೆಯಾಗುತ್ತದೆ ಎಂಬ ನಂಬಿಕೆ ಇದೆ. ಪ್ರಾಣಿಗಳನ್ನು ಸಮದ್ರಷ್ಟಿಯಿಂದ ನೋಡಬೇಕು ಎನ್ನುವ ನಮ್ಮ ಹಿರಿಯರ ಆಶಯ ಎಂಥ ಉದಾರವಾದದ್ದು ಅಲ್ಲವೇ?

ಸೋಮನಾಥ ದೇವಾಲಯ

someshwara-1  someshwara-2  someshwara-4

ಈ ದೇವಾಲಯವು ಕೋಲಾರದ ಪೇಟೆಯ ಮಧ್ಯ ದಲ್ಲಿ ಇದೆ. ಕೋಲಾರಮ್ಮ ದೇವಸ್ಥಾನದಿಂದ ಕೇವಲ ೨೦೦ ಮೀ ಗಳ ಅಂತರದಲ್ಲಿದೆ. ಇದು ತುಂಬಾ ಹಳೆಯ ಕಾಲದ ದೇವಸ್ಥಾನ. ಇಲ್ಲಿ ಮೂಲ ವಿಗ್ರಹ ಮತ್ತು ದರ್ಶನ ಮೂರ್ತಿ ಎಂಬ ಎರಡು ಲಿಂಗಗಳಿವೆ. ಶಿವಲಿಂಗದೆದುರು ದೊಡ್ಡದಾದ ನಂದಿ ವಿಗ್ರಹವಿದೆ. ಸುಂದರವಾದ ಮತ್ತು ಹಲವಾರು ಕಂಬಗಳ ದೇವಸ್ಥಾನ ಇದು. ಶಾಂತವಾಗಿ ಈ ದೇವಾಲಯದಲ್ಲಿ ಕುಳಿತು ಧ್ಯಾನ ಮಾಡಿದರೆ ನೆಮ್ಮದಿ ಸಿಗುವುದು ಖಚಿತ. ಆವರಣದಲ್ಲಿ ಒಂದು ಕಲ್ಯಾಣ ಮಂಟಪವಿದೆ. ಬಹುಷಃ ಹಳೆಯ ಕಾಲದಲ್ಲಿ ಇಲ್ಲಿ ಮಾಡುತ್ತಿದ್ದರೋ ಏನೋ. ಇದು ಸುಂದರವಾದ ಕಲ್ಯಾಣ ಮಂಟಪವಾಗಿದ್ದು ಮಧ್ಯದಲ್ಲಿ ಎತ್ತರವಾದ ಸ್ಥಳವಿದೆ. ಪಕ್ಕದಲ್ಲಿ ಪಾರ್ವತೀ ದೇವಿಯ ದೇವಾಲಯವಿದೆ. ದೇವಸ್ಥಾನದ ಚಂದ್ರಶಾಲೆಯು ಹಳೆಯದಾಗಿದ್ದು ಜೀರ್ಣಸ್ಥಿತಿಯಲ್ಲಿದೆ.

someshwara-3  someshwara-6  someshwara-8

ಕೋಟಿಲಿಂಗೇಶ್ವರ ದೇವಸ್ಥಾನ

kotilingeswara-1  kotilingeswara-2

ಇದು ಕೋಲಾರ ಜಿಲ್ಲೆಯ ಕಮ್ಮಸಂದ್ರ ಎನ್ನುವ ಊರಿನಲ್ಲಿದೆ. ಇದು ಬಂಗಾರಪೇಟೆ ಗೆ (ಬಂಗಾರಪೇಟ್ ಚಾಟ್ಸ್ ಹೆಸರುವಾಸಿ) ಹತ್ತಿರದಲ್ಲಿದೆ. ಇಲ್ಲಿ ಪ್ರವೇಶ ಶುಲ್ಕ ೨೦ ರೂ ಕೊಟ್ಟು ದೇವಸ್ಥಾನದ ಒಳಗೆ ಪ್ರವೇಶಿಸಬೇಕು. ಒಳಗೆ ಹೋಗುತ್ತಲೇ ಶಿವಲಿಂಗಗಳ ದರ್ಶನ ಪ್ರಾರಂಭ. ಮೊದಲಿಗೆ ಬ್ರಹ್ಮ, ವಿಷ್ಣು, ಮಹೇಶ್ವರರ ದೇವಸ್ಥಾನ. ಮುಂದೆ ಹೋದಂತೆ ಗಣಪತಿ, ಸುಬ್ರಹ್ಮಣ್ಯ, ದೇವಿ, ವಾಸವಿ, ಆಂಜನೇಯ, ಗುರುರಾಘವೇಂದ್ರ, ಅಯ್ಯಪ್ಪ, ಶನಿದೇವ, ನಾಗರು ಮುಂತಾದ ದೇವತೆಗಳ ಚಿಕ್ಕ ಚಿಕ್ಕ ದೇವಸ್ಥಾನಗಳಿವೆ. ಈ ಎಲ್ಲಾ ದೇವರುಗಳ ದರ್ಶನ ಪಡೆದು ಮುಂದುವರಿದರೆ ಅಲ್ಲಿ ಎತ್ತರದ ಶಿವಲಿಂಗವಿದೆ. ಅಲ್ಲಿ ಶಿವಲಿಂಗದ ಎದುರಿಗೆ ದೊಡ್ಡದಾದ ನಂದಿಯ ವಿಗ್ರಹವಿದೆ. ಇವುಗಳ ನಡುವೆ ಸಹಸ್ರಾರು ಲಿಂಗಗಳು. ಈಗ ೯೦ ಲಕ್ಷ ಶಿವಲಿಂಗಗಳ ಸ್ಥಾಪನೆ ಮಾಡಲಾಗಿದೆ. ಇನ್ನೂ ೧೦ ಲಕ್ಷಗಳಷ್ಟು ಲಿಂಗ ಸ್ಥಾಪನೆ ಆಗಬೇಕು ಎಂದು ಅರ್ಚಕರು ತಿಳಿಸಿದರು. ಹಲವಾರು ಗಾತ್ರಗಳ ಲಿಂಗಗಳು ಇಲ್ಲಿವೆ.  ಇಷ್ಟು ಲಿಂಗಗಳ ದರ್ಶನ ಪಡೆಯಲು ಚಾವಣಿಯನ್ನು ಮಾಡಿ ನೆರಳನ್ನು ಕಲ್ಪಿಸಲಾಗಿದೆ. ಮುಂದೆ ಮುಂದೆ ಹೋದ ಹಾಗೆ ಎಲ್ಲಿ ನೋಡಿದರಲ್ಲಿ ಲಿಂಗಗಳು. ಈ ದೇವಸ್ಥಾನದ ಆವರಣದ ಒಳಗೆ ಸಾಕಷ್ಟು ದೇವತೆ ಗಳ ದೇವಸ್ಥಾನಗಳು ಹಾಗು ವಿಗ್ರಹಗಳಿವೆ. ಇಲ್ಲಿ ಒಂದೇ ಒಂದು ಕಷ್ಟ ಅಂದರೆ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇಲ್ಲ ಹಾಗು ದೇವಸ್ಥಾನದ ಆಸು ಪಾಸಿನಲ್ಲಿ ಎಲ್ಲೂ ಹೋಟೆಲ್ ಗಳು ಇಲ್ಲ. ಹಾಗಾಗಿ ಊಟ ತಿಂಡಿಗೆ ಸ್ವಲ್ಪ ಪರದಾಡುವ ಪರಿಸ್ಥಿತಿ ಬರುತ್ತದೆ.

kotilingeswara-6  kotilingeswara-3

Leave a Reply

Your email address will not be published. Required fields are marked *